ಪಿಸ್ತ  -
ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ.  ಇದಕ್ಕೆ ಹಸುರು ಬಾದಾಮಿ ಎಂಬ ಹೆಸರೂ ಇದೆ.  ಪಿಸ್ತೇರಿಯ ವೇರ ಇದರ ಶಾಸ್ತ್ರೀಯ ಹೆಸರು.  ಇರಾನ್, ಆಫ್ಘಾನಿಸ್ತಾನ್, ಮಧ್ಯ ಏಷ್ಯಾದ ಪ್ರದೇಶಗಳು ಇದರ ತವರು ಎನ್ನಲಾಗಿದೆ.  ಇಟಲಿ, ತುರ್ಕಿ, ಸಿರಿಯ, ಇರಾನ್, ಆಫ್ಘಾನಿಸ್ತಾನಗಳಲ್ಲಿ ಇದನ್ನು ವಿಸ್ತಾರವಾಗಿ ಬೆಳೆಸಲಾಗುತ್ತಿದೆ.  ಲೆಬನಾನ್ ಹಾಗೂ ಪಾಕಿಸ್ತಾನಗಳಲ್ಲೂ ಇದರ ಕೃಷಿ ಉಂಟು.  ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲೂ ಇದನ್ನು ಅಲ್ಪ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ.  

ಇದು ಉಷ್ಣ ಹವೆಗೆ ಒಗ್ಗಿಕೊಂಡು ಸುಮಾರು 10 ಮೀಟರ್ ಎತ್ತರಕ್ಕೆ ಬೆಳೆಯುವ ಮರ.  ವಿಸ್ತಾರವಾಗಿ ಹರಡಿಕೊಂಡು ಬೆಳೆಯುವ ರೆಂಬೆಗಳು, ಮಂದ, ಅಗಲ ಹಾಗೂ ಚರ್ಮಿಲವಾದ ನಿತ್ಯ ಹಸುರು ಎಲೆಗಳು, ದೊಡ್ಡ ದೊಡ್ಡ ಗೊಂಚಲುಗಳಲ್ಲಿ ಅರಳುವ ಸಣ್ಣ ಗಾತ್ರದ ಹೂಗಳು ಇದರ ಪ್ರಧಾನ ಲಕ್ಷಣಗಳು.
ಫಲ ಡ್ರೂಪ್ ಮಾದರಿಯದು.  ಒಳಗಿನ ಬೀಜ ಹೆಚ್ಚು ಕಡಿಮೆ ಬಾದಾಮಿ ಬೀಜದಂತೆಯೇ ಇದೆ.  ಇದರ ಗಾತ್ರ ಸುಮಾರು 1-1.5 ಸೆಂ.ಮೀ.  ಬಣ್ಣ ಮಾಸಲು ಬಿಳಿ.  ಪ್ರತಿ ಬೀಜದ ಸುತ್ತ ಕೆಂಪು ಬಣ್ಣದ ಸುಕ್ಕುಕಟ್ಟಿದ ತೆಳುವಾದ ಪೊರೆಯುಂಟು.  ಬೀಜಗಳಿಗೆ ಮಧುರವಾದ ನರುಗಂಪು ಇದೆ.
ಅಮೆರಿಕ ಸಂಯುಕ್ತ ಸಂಸ್ಥಾನ ತುರ್ಕಿಯಿಂದ ವರ್ಷಕ್ಕೆ ಸುಮಾರು 1,500 ಟನ್ನುಗಳಷ್ಟು ಪಿಸ್ತ ಬೀಜವನ್ನು ಆಯಾತ ಮಾಡಿಕೊಳ್ಳುತ್ತದೆ.  ಭಾರತ ವರ್ಷವೊಂದಕ್ಕೆ ಸುಮಾರು 150,000 ಕೆ.ಜಿ. ಪಿಸ್ತ ಬೀಜವನ್ನು ಆಫ್ಘಾನಿಸ್ತಾನ್ ಮತ್ತು ಇರಾನ್‍ಗಳಿಂದ ಆಮದು ಮಾಡಿಕೊಳ್ಳುತ್ತದೆ.
ಸಿಹಿತಿಂಡಿ, ಮಿಠಾಯಿ, ಐಸ್ ಕ್ರೀಂ ಭಕ್ಷ್ಯಗಳ ತಯಾರಿಕೆಯಲ್ಲಿ ಪಿಸ್ತವನ್ನು ಬಳಸಲಾಗುತ್ತದೆ.  ಬೀಜಗಳನ್ನು ಹುರಿದು ಉಪ್ಪು ಸವರಿ ತಿನ್ನುವುದುಂಟು.  ಬೀಜಗಳಿಗೆ ಜೀರ್ಣಕಾರಿ ಶಾಮಕ ಹಾಗೂ ಶಕ್ತೋತ್ತೇಜಕ ಗುಣಗಳಿವೆ ಎನ್ನಲಾಗಿದೆ.  ಇರಾನಿನಲ್ಲಿ ಬೀಜದ ಸಿಪ್ಪೆಯಿಂದ ಮಾರ್‍ಮಲೇಡ್ ಎಂಬ ಭಕ್ಷ್ಯವನ್ನು ತಯಾರಿಸುವುದಿದೆ.  ಬೀಜದ ಸಿಪ್ಪೆಯನ್ನು ಗೊಬ್ಬರವಾಗಿ ಬಳಸುವುದೂ ಉಂಟು.  ಬೀಜದ ಪಪ್ಪಿನಲ್ಲಿ 19.8% ಪ್ರೋಟೀನು, 53.5%  ಕೊಬ್ಬು, 16.2% ಕಾರ್ಬೊಹೈಡ್ರೇಟ್ 2.8% ಖನಿಜಾಂಶ.  0.14% ಕ್ಯಾಲ್ಸಿಯಮ್ ಹಾಗೂ 0.43% ರಂಜಕ ಇವೆ.  ಜೊತೆಗೆ ಪ್ರತಿ 100 ಗ್ರಾಂ ಬೀಜದಲ್ಲಿ 13.7 ಮಿ. ಗ್ರಾಂ. ಕಬ್ಬಿಣ, 240 IU. ವಿಟಮಿನ್ ಎ, 067 ಮಿ.ಗ್ರಾಂ.  ತಯಾಮಿನ್, 0.03 ಮಿ.ಗ್ರಾಂ.  ರೈಬೊಫ್ಲೇವಿನ್, 1.4 ಮಿ.ಗ್ರಾಂ.  ನಿಕೋಟಿನಿಕ್ ಆಮ್ಲಗಳುಂಟು.  ಬೀಜಗಳಿಂದ ತೈಲವನ್ನು ಪಡೆಯಬಹುದು.  ಆದರೆ, ಬೀಜಗಳನ್ನೇ ಖಾದ್ಯ ವಸ್ತುವಾಗಿ ಬಳಸುವುದರಿಂದ ಎಣ್ಣೆಯನ್ನು ಹೊರತೆಗೆಯುವುದು ಅಷ್ಟಾಗಿ ರೂಢಿಯಲ್ಲಿಲ್ಲ.
ಪಿಸ್ತದ ಎಲೆಗಳ ಮೇಲೆ ಸಣ್ಣ ಅನಿರ್ದಿಷ್ಟ ಆಕಾರದ ಗಂಟುಗಳೇಳುವುದುಂಟು.  ಇದಕ್ಕೆ ಬೊಕರಗಂಟುಗಳೆಂದು ಹೆಸರು. ಚರ್ಮ ಹದಗಾರಿಕೆಯಲ್ಲಿ ಬಳಸುವ ಸಲುವಾಗಿ ಭಾರತ ಇವನ್ನು ಆಮದು ಮಾಡಿಕೊಳ್ಳುತ್ತದೆ.  ಪಿಸ್ತವನ್ನು ಬಡಿಂಗ್ ವಿಧಾನದಿಂದ ವೃದ್ಧಿಸಲಾಗುತ್ತದೆ.  ಇದರ ಹತ್ತಿರ ಸಂಬಂಧಿಯಾದ ಚೀನೀ ಪಿಸ್ತವನ್ನು (ಪಿಸ್ತೇಸಿಯ ಚೈನೆನ್ಸಿಸ್) ಅಲಂಕಾರ ಸಸ್ಯವಾಗಿ ಬೆಳೆಸುವುದುಂಟು.  (ಕೆ.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ